ವಿನಯಾದಿತ್ಯ 1

	ಬಾದಾಮಿ ಚಳುಕ್ಯ ವಂಶದ ಅರಸು (681-96). ಒಂದನೆಯ ವಿಕ್ರಮಾದಿತ್ಯನ ಮಗ. ಈತ ತನ್ನ ತಂದೆಯ ಕಾಲದಲ್ಲೇ ರಾಜ್ಯದ ಆಡಳಿತದಲ್ಲಿ ಭಾಗವಹಿಸಿ ಅನೇಕ ಯುದ್ಧಗಳಲ್ಲಿ ಪಾಲ್ಗೊಂಡಿದ್ದ. ಒಂದು ಶಾಸನದಿಂದ ವಿಕ್ರಮಾದಿತ್ಯನು ತನ್ನ ಮಗ ವಿನಯಾದಿತ್ಯನಿಗೂ ಮೊಮ್ಮಗ ವಿಜಯಾದಿತ್ಯನಿಗೂ ಸರಿಯಾದ ಸಮರ ಶಿಕ್ಷಣವನ್ನು ಒದಗಿಸಿ ಕೊಟ್ಟನೆಂದು ತಿಳಿದುಬರುತ್ತದೆ. ವಿಕ್ರಮಾದಿತ್ಯ ದೂರ ಪ್ರಾಂತಗಳ ಮೇಲೆ ದಂಡಯಾತ್ರೆಗಳನ್ನು ಕೈಗೊಂಡಾಗ ರಾಜ್ಯದ ಆಡಳಿತವನ್ನು ಅವನ ಮಗ ವಿನಯಾದಿತ್ಯ ಮತ್ತು ಮೊಮ್ಮಗ ವಿಜಯಾದಿತ್ಯ ನಿರ್ವಹಿಸುತ್ತಿದ್ದರು.

	ವಿನಯಾದಿತ್ಯನ ಕಾಲದಲ್ಲಿ ರಾಜ್ಯ ಶಾಂತಿಪೂರ್ಣವಾಗಿಯೂ ಸಮೃದ್ಧ ವಾಗಿಯೂ ಇದ್ದಿತೆಂದು ಕೆಲವು ಶಾಸನಗಳಿಂದ ತಿಳಿದುಬರುತ್ತದೆ. ಇವನು ಆಡಳಿತದ ವಿಷಯದಲ್ಲಿ ಬಹಳ ಎಚ್ಚರಿಕೆ ವಹಿಸಿದ್ದ. ಆಗಾಗ ಸೇನಾಸಮೇತನಾಗಿ ರಾಜ್ಯದ ನಾಲ್ಕು ಕಡೆಗಳಲ್ಲೂ ಸಂಚರಿಸುತ್ತಿದ್ದ. ಒಮ್ಮೆ ಪಂಪಾತೀರ್ಥದಲ್ಲೂ ಬೀಡುಬಿಟ್ಟಿದ್ದ. ರಾಜ್ಯದ ಆಡಳಿತವನ್ನು ನಿರ್ವಹಿಸಲು ಇವನ ಮಗ ಯುವರಾಜ ವಿಜಯಾದಿತ್ಯ ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತಿದ್ದ.

	ಇವನ ಕಾಲದಲ್ಲಿ ವಿದೇಶಿ ದಾಳಿಗಳು ಕಡಿಮೆಯಾದವಲ್ಲದೆ, ರಾಜ್ಯದ ಒಳ ಭಾಗದಲ್ಲಿ ಶಾಂತಿ ಕಲಕುವಂಥ ಯಾವ ದುರ್ಘಟನೆಗಳೂ ನಡೆಯಲಿಲ್ಲ. ಪಲ್ಲವರನ್ನು ಒಂದನೆಯ ವಿಕ್ರಮಾದಿತ್ಯ ಸದೆಬಡಿದಿದ್ದರಿಂದ, ಅವರಿಂದ ಯಾವ ತೊಂದರೆಯೂ ಉಂಟಾಗಲಿಲ್ಲ. ಕೆಲವು ಶಾಸನಗಳು ಈತನೇ ಪಲ್ಲವರ ಬಲವನ್ನು ಹುದುಗಿಸಿ ಕವೇರಿ (ಕಾಂಬೋಡಿಯ), ಪಾರಸಿಕ (ಪರ್ಷಿಯ) ಮತ್ತು ಸಿಂಹಳದ ದ್ವೀಪಾಧಿಪರಿಂದ ಕಪ್ಪ ಕಾಣಿಕೆಯನ್ನು ವಸೂಲಿ ಮಾಡಿದನೆಂದು ವಿವರಿಸುತ್ತವೆ.

	ವಿಜಯಾದಿತ್ಯನ ಕಾಲದ ಕೆಲವು ಶಾಸನಗಳು ಅವನ ತಂದೆ ವಿನಯಾ ದಿತ್ಯನ ಉತ್ತರ ಭಾರತದ ದಂಡಯಾತ್ರೆಗಳನ್ನು ವಿವರಿಸುತ್ತವೆ. ಈ ಯುದ್ಧದಲ್ಲಿ ವಿಜಯಾದಿತ್ಯನೂ ಪಾಲ್ಗೊಂಡಿದ್ದ. ವಿಜಯಾದಿತ್ಯ ತನ್ನ ತಂದೆಯ ಸಮಕ್ಷಮದಲ್ಲೇ ವೈರಿ ಸೇನೆಗಳನ್ನು ಧ್ವಂಸಮಾಡಿ, ಪಾಲಿಧ್ವಜ ಶ್ವೇತಚ್ಛತ್ರ, ಚಾಮರ ಮೊದಲಾದ ಲಾಂಛನಗಳನ್ನು ವಶಪಡಿಸಿಕೊಂಡು, ತನ್ನ ತಂದೆಗೆ ಅರ್ಪಿಸಿದನೆಂದು ತಿಳಿದುಬರುತ್ತದೆ. ಈ ದಿಸೆಯಲ್ಲಿ ಕೆಲವು ಇತಿಹಾಸಕಾರರು ಚಳುಕ್ಯ ರಾಜನು ಗಂಗಾ ಮತ್ತು ಯಮುನಾ ನದಿಯ ದಡಗಳ ಮೇಲೆ ಕನೂಜಿನ ರಾಜ ಯಶೋವರ್ಮನನ್ನು ಸೋಲಿಸಿದ್ದಾನೆಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವು ಇತಿಹಾಸಕಾರರು ವಜ್ರಟ ಎಂಬವನನ್ನು ಸೋಲಿಸಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಅಂಶದ ಮೇಲೆ ಸಾಕಷ್ಟು ಬೆಳಕು ಬೀರುವ ಆಧಾರಗಳಿಲ್ಲದೆ ಇರುವುದರಿಂದ ಚಳುಕ್ಯ ವಿನಯಾದಿತ್ಯ ಸೋಲಿಸಿದ ಉತ್ತರ ಭಾರತದ ರಾಜನಾರು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ.

	ಉತ್ತರ ಭಾರತದ ದಂಡಯಾತ್ರೆ ವಿನಯಾದಿತ್ಯನ ಆಳಿಕೆಯ ಅಂತ್ಯ ಭಾಗದಲ್ಲಿ ನಡೆಯಿತೆಂದು ಅಭಿಪ್ರಾಯಪಡಲಾಗಿದೆ. ಈ ಯುದ್ಧದಲ್ಲಿ ವಿನಯಾದಿತ್ಯನ ಮಗ ವಿಜಯಾದಿತ್ಯ ಸೆರೆಹಿಡಿಯಲ್ಪಟ್ಟನೆಂದು ತಿಳಿದುಬರುತ್ತದೆ. ವಿಜಯಾದಿತ್ಯ ಇನ್ನೂ ಶತ್ರುವಿನ ಸೆರೆಮನೆಯಲ್ಲಿರು ವಾಗಲೇ ವಿನಯಾದಿತ್ಯ ತೀರಿಕೊಂಡಿರಬಹುದು (ಸು. 696) ಎಂಬ ಊಹೆ ಸಹ ಇದೆ.

	ವಿನಯಾದಿತ್ಯನಿಗೆ ಶ್ರೀಪೃಥ್ವೀವಲ್ಲಭ, ಸತ್ಯಾಶ್ರಯ, ರಾಜಾಶ್ರಯ, ಯುದ್ಧಮಲ್ಲ ಎಂಬ ಬಿರುದುಗಳಿದ್ದುವು. ರನ್ನ ತನ್ನ ಗದಾಯುದ್ಧದಲ್ಲಿ ವಿನಯಾದಿತ್ಯನನ್ನು ದುರ್ಧರಮಲ್ಲ ಎಂದು ವರ್ಣಿಸಿದ್ದಾನೆ. ವಿನಯಾದಿತ್ಯನ ರಾಣಿ ವಿನಯವತಿ. ವಿನಯವತಿ ವಿನಯಾದಿತ್ಯನ ಅನಂತರವೂ ಜೀವಿಸಿದ್ದು 696ರಲ್ಲಿ ಬಾದಾಮಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದಳು. ವಿನಯಾದಿತ್ಯನಿಗೆ ಕುಂಕುಮದೇವಿ ಎಂಬ ಮಗಳಿದ್ದಳು. ಈಕೆ ಆಳುಪವಂಶದ ದೊರೆ ಚಿತ್ರವಾಹನನನ್ನು ಮದುವೆಯಾಗಿದ್ದಳು.
	   *
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ